ಪೆತಿಕ್ - ಲಾರೆನ್ಸ್ 1871-1961. ಫ್ರೆಡರಿಕ್ ವಿಲಿಯಮ್ ಪೆತಿಕ್-ಲಾರೆನ್ಸ್. ಬ್ರಿಟನ್ನಿನ ರಾಜಕಾರಣಿ. ಸಮಾಜ ಸುಧಾರಕ ಮತ್ತು ಲೇಖಕ. ಫ್ರೆಡರಿಕ್ ವಿಲಿಯಮ್ ಲಾರೆನ್ಸ್ ಎಂಬುದು ಮೊದಲಿನ ಹೆಸರು. 1871ರ ಡಿಸೆಂಬರ್ 28 ರಂದು ಲಂಡನ್ನಿನಲ್ಲಿ ಹುಟ್ಟಿದರು. ಅವರು ಕೇಂಬ್ರಿಜ್‍ನಲ್ಲಿ ಶಿಕ್ಷಣ ಪಡೆದು ಬ್ಯಾರಿಸ್ಟರ್ ಆಗಿ ಸಾರ್ವಜನಿಕ ಜೀವನಕ್ಕಿಳಿದರು. ಇಪ್ಪತ್ತನೆಯ ಶತಮಾನದ ಮೊದಲ ಎರಡು ದಶಕಗಳಲ್ಲಿ ಮಹಿಳೆಯರ ಮತದಾನ ಹಕ್ಕಿಗಾಗಿ ಹೋರಾಡಿದ ಅವರು 1945-47ರಲ್ಲಿ ಭಾರತ ಬರ್ಮಾಗಳಿಗೆ ರಾಜ್ಯ ಸಚಿವರಾಗಿದ್ದರು. ತಮ್ಮಂತೆಯೇ ಸಮಾಜಸೇವಾ ಕಾರ್ಯದಲ್ಲಿ ತೊಡಗಿದ್ದ ಎಮಿಲಿನ್ ಪೆತಿಕರನ್ನು 1901ರಲ್ಲಿ ವಿವಾಹವಾದಾಗ ತಮ್ಮ ಹೆಸರಿಗೆ ಪೆತಿಕ್ ಎಂಬುದನ್ನು ಸೇರಿಸಿಕೊಂಡರು.

	ಅವರು 1902-05 ರಲ್ಲಿ ಎಕೊ ಪತ್ರಿಕೆಗೂ 1904-08ರಲ್ಲಿ ರಿಫಾರ್ಮರ್ಸ್ ಯಿಯರ್ ಬುಕ್‍ಗೂ 1905-0ರಲ್ಲಿ ಲೇಬರ್ ರಿಕಾರ್ಡ್ ಅಂಡ್ ರಿವ್ಯೂಗೂ ಸಂಪಾದಕರಾಗಿದ್ದರು. ಮಹಿಳೆಯರಿಗೆ ಮತದಾನದ ಅಧಿಕಾರ ಮೊದಲಾದ ಹಕ್ಕುಗಳಿಗಾಗಿ ಪತ್ನಿಯೊಂದಿಗೆ ಅವರು ಚಳವಳಿಯಲ್ಲಿ ಪಾಲ್ಗೊಂಡಿದ್ದರು. ಈ ಸಂಬಂಧವಾಗಿ 1912ರಲ್ಲಿ ಕೆಲವು ತಿಂಗಳುಗಳ ಕಾಲ ಸೆರೆವಾಸ ಅನುಭವಿಸಿದರು. 1913ರಲ್ಲಿ ವೋಟ್ ಫಾರ್ ವಿಮೆನ್ ಪತ್ರಿಕೆಯ ಸಂಪಾದಕರಾದರು. 

	ಪೆತಿಕ್ - ಲಾರೆನ್ಸರು ರಾಜಕಾರಣವನ್ನು ಪ್ರವೇಶಿಸಿ 1923ರಲ್ಲಿ ಲೇಬರ್ ಪಕ್ಷದ ಅಭ್ಯರ್ಥಿಯಾಗಿ ವಿನ್ಸ್‍ಟನ್ ಚರ್ಚಿಲ್ಲರನ್ನು ಸೋಲಿಸಿ ಕಾಮನ್ಸ್ ಸಭೆಗೆ ಚುನಾಯಿತರಾದರು. ಜೇಮ್ಸ್ ರಾಮ್ಸೆ ಮ್ಯಾಕ್ಡೊನಾಲ್ಡರ ಎರಡನೆಯ ಕಾರ್ಮಿಕ ಮಂತ್ರಿಮಂಡಲದಲ್ಲಿ (1929-31) ಖಜಾನೆಯ ಹಣಕಾಸು ಸಚಿವರಾಗಿದ್ದರು. ಭಾರತದ ರಾಜಕೀಯ ಭವಿಷ್ಯವನ್ನು ಕುರಿತು ಚರ್ಚಿಸಲು 1931ರಲ್ಲಿ ಲಂಡನ್ನಿನಲ್ಲಿ ಸೇರಿದ್ದ ದುಂಡುಮೇಜಿನ ಪರಿಷತ್ತಿನಲ್ಲಿ ಭಾಗವಹಿಸಿದ್ದವರ ಪೈಕಿ ಪೆತಿಕ್ - ಲಾರೆನ್ಸರೂ ಒಬ್ಬರು. 1935ರಲ್ಲಿ ಪುನಃ ಕಾಮನ್ಸ್ ಸಭೆಗೆ ಚುನಾಯಿತರಾದ ಪೆತಿಕ್ - ಲಾರೆನ್ಸರು 1954ರಲ್ಲಿ ಬ್ಯಾರನ್ ಆಗಿ ಲಾಡ್ರ್ಸ್ ಸಭೆಯ ಸದಸ್ಯರಾದರು. ಕ್ಲೆಮೆಂಟ್ ರಿಚರ್ಡ್ ಆಟ್ಲಿಯ ಕಾರ್ಮಿಕ ಸರ್ಕಾರದಲ್ಲಿ ಅವರು ಭಾರತ ಮತ್ತು ಬರ್ಮಾಗಳಿಗೆ ರಾಜ್ಯ ಸಚಿವರಾದರು (1945-47).

	ಭಾರತದ ಸಮಸ್ಯೆಯ ಪರಿಹಾರಕ್ಕಾಗಿ ಆಳವಾದ ಅಧ್ಯಯನ ನಡೆಸಿದ ಲಾರೆನ್ಸರು 1946ರಲ್ಲಿ ಭಾರತಕ್ಕೆ ಭೇಟಿ ನೀಡಿದ ಸಂಪುಟ ನಿಯೋಗದ ಸದಸ್ಯರಲ್ಲಿ ಒಬ್ಬರಾಗಿದ್ದರು. ಭಾರತಕ್ಕೆ ಸ್ವಾತಂತ್ರ್ಯ ನೀಡುವ ಬಗ್ಗೆ ಭಾರತೀಯ ನಾಯಕರೊಡನೆ ಆ ನಿಯೋಗ ವ್ಯಾಪಕವಾಗಿ ಚರ್ಚೆ ನಡೆಸಿತು. 

ಇವರು ಅನೇಕ ಗ್ರಂಥಗಳನ್ನು ಬರೆದಿದ್ದಾರೆ. 1943ರಲ್ಲಿ ಫೇಟ್ ಹ್ಯಾಸ್ ಬೀನ್ ಕೈಂಡ್ ಎಂಬ ಅವರ ಆತ್ಮಕಥೆ ಪ್ರಕಟವಾಯಿತು. ಪೆತಿಕ್ - ಲಾರೆನ್ಸರ ಜೀವನಚರಿತ್ರೆಯನ್ನು ವೆರ ಮೇರಿ ಬ್ರಿಟನ್ ಬರೆದಿದ್ದಾರೆ (1963).
(ಡಿ.ಎಸ್.ಜೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ